ನಾವು ನಿಮ್ಮ ಸ್ನೇಹಿತರು, ನಮ್ಮನ್ನು ಕೊಲ್ಲಬೇಡಿ!

ನಾವು ನಿಮ್ಮ ಸ್ನೇಹಿತರು, ನಮ್ಮನ್ನು ಕೊಲ್ಲಬೇಡಿ!

ಪ್ರತಿದಿನ ರೈತರು ತಿಳಿದೋ ತಿಳಿಯದೆಯೋ ತಮ್ಮ ಬೆಳೆಗಳ ಅತ್ಯುತ್ತಮ ಸ್ನೇಹಿತರನ್ನೇ ಕೊಲ್ಲುತ್ತಿದ್ದಾರೆ. ಇದು ಆಧುನಿಕ ಕೃಷಿಯಲ್ಲಿರುವ ನಮಗೆ ಕಾಣದಿರುವ ಒಂದು ದೊಡ್ಡ ಸಮಸ್ಯೆ.

ಬೆಳೆಗಳಿಗೆ ಹಾನಿ ಮಾಡುವ ಕೀಟಗಳನ್ನು ಕೊಲ್ಲಲು ನಾವು ಕೀಟನಾಶಕ ಸಿಂಪಡಿಸುತ್ತೇವೆ. ಆದರೆ ಅದೇ ಸಮಯದಲ್ಲಿ, ಆ ಹಾನಿಕಾರಕ ಕೀಟಗಳನ್ನು ಸಹಜವಾಗಿ ನಿಯಂತ್ರಿಸುವ ಉಪಕಾರಿ ಕೀಟಗಳನ್ನೂ ಕೊಲ್ಲುತ್ತೇವೆ.

ಇದರಿಂದ ಪ್ರಕೃತಿಯ ಸಮತೋಲನಕ್ಕೆ ಧಕ್ಕೆಯಾಗುತ್ತದೆ. ಕೀಟಗಳ ಸಮಸ್ಯೆ ಮತ್ತೆ ಹೆಚ್ಚಾಗಬಹುದು. ಕೊನೆಗೆ ಕೃಷಿ ಇನ್ನಷ್ಟು ಕೀಟನಾಶಕಗಳ ಮೇಲೆ ಅವಲಂಬಿತವಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು.

ರೈತರು ತೋಟದಲ್ಲಿ ಒಂದು ಎಲೆ ಮುದುರಿರುವುದನ್ನು ನೋಡುತ್ತಾರೆ. ಎಲ್ಲೋ ಒಂದು ಕಂಬಳಿ ಹುಳು ಕಾಣುತ್ತದೆ. ಮತ್ತೊಂದು ಎಲೆಯಲ್ಲಿ ಕೆಲವು ರಂಧ್ರಗಳು ಕಾಣಿಸುತ್ತವೆ.

ತಕ್ಷಣ ಮನಸ್ಸಿಗೆ ಬರುವ ಯೋಚನೆ:

  • “ಕೀಟ ಬಂದಿದೆ. ಕೀಟನಾಶಕ ಸಿಂಪಡಿಸಬೇಕು.” ಆದರೆ, ಒಂದು ಕ್ಷಣ ತಡೆಯಿರಿ.
  • ಸಿಂಪಡಿಸುವ ಮೊದಲು ಗಿಡವನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ.
  • ಅಲ್ಲಿ ಮತ್ತೊಂದು ಕೀಟ ಇರಬಹುದು.

ಅದು ನಿಮ್ಮ ಬೆಳೆಗೆ ಹಾನಿ ಮಾಡಲು ಬಂದಿರುವ ಕೀಟವಲ್ಲ. ನಿಮ್ಮ ಬೆಳೆಗೆ ಹಾನಿ ಮಾಡುತ್ತಿರುವ ಕೀಟವನ್ನು ಬೇಟೆಯಾಡಲು ಬಂದಿರುವ ನಿಮ್ಮ ಸ್ನೇಹಿತನಾಗಿರಬಹುದು!

ಮುದುರಿದ ದಾಸವಾಳದ ಎಲೆ ನನಗೆ ಕಲಿಸಿದ ಪಾಠ:

ಈ ವಿಷಯ ನನಗೆ ನನ್ನ ಸುತ್ತಮುತ್ತಲಿನ ಪರಿಸರದಲ್ಲಿ ನಡೆದ ಒಂದು ಸರಳ ಗಮನಿಸುವಿಕೆಯಿಂದ ಬಹಳ ಸ್ಪಷ್ಟವಾಯಿತು. ಒಂದು ದಾಸವಾಳದ ಗಿಡದಲ್ಲಿ ಕೆಲವು ಎಲೆಗಳು ಮುದುರಿ, ರೇಷ್ಮೆಯಂತಹ ಎಳೆಗಳಿಂದ ಒಂದಕ್ಕೊಂದು ಅಂಟಿಕೊಂಡಿರುವುದನ್ನು ಗಮನಿಸಿದೆ. ಮುದುರಿದ ಎಲೆಗಳ ಒಳಗೆ ಕೆಲವು ರಂಧ್ರಗಳೂ ಇದ್ದವು.

ಮುದುರಿದ ಎಲೆಗಳಲ್ಲಿ ರಂಧ್ರ
ಮುದುರಿದ ಎಲೆಗಳಲ್ಲಿ ರಂಧ್ರ

ನಾನು ಎಚ್ಚರಿಕೆಯಿಂದ ಅಂತಹ ಒಂದು ಎಲೆಯನ್ನು ತೆರೆದು ನೋಡಿದಾಗ, ಅದರೊಳಗೆ ಹಸಿರು ಬಣ್ಣದ ಕಂಬಳಿ ಹುಳುಗಳು ಕಂಡುಬಂದವು.ಅವು ಎಲೆಯನ್ನು ತಿನ್ನುತ್ತಾ, ಮುದುರಿದ ಎಲೆಯ ಒಳಗೆ ಅಡಗಿ ಕುಳಿತಿದ್ದವು.ಅದೇ ಸಮಯದಲ್ಲಿ, ಆ ಗಿಡದ ಸುತ್ತಲೂ ಕಣಜದಂತಿರುವ ಒಂದೆರಡು ಕೀಟಗಳು ಓಡಾಡುತ್ತಾ, ಎಲೆಗಳನ್ನು ಹುಡುಕುತ್ತಿರುವುದನ್ನೂ ಗಮನಿಸಿದೆ.

ಆಗ ಒಂದು ಕುತೂಹಲಕಾರಿ ಪ್ರಶ್ನೆ ಮೂಡಿತು:

“ಈ ಕಣಜಗಳು ಮುದುರಿದ ಎಲೆಗಳ ಒಳಗೆ ಅಡಗಿರುವ ಕಂಬಳಿ ಹುಳುಗಳನ್ನು ಹುಡುಕುತ್ತಿವೆಯೇ?”

ವಿಜ್ಞಾನದಲ್ಲಿ ಇಂತಹ ಸಂಬಂಧಗಳಿಗೆ ಉತ್ತಮ ಉದಾಹರಣೆಗಳಿವೆ.

ಹಲವು ಒಂಟಿ ಕಣಜಗಳು ಕಂಬಳಿ ಹುಳುಗಳನ್ನು ಬೇಟೆಯಾಡುತ್ತವೆ. ಉದಾಹರಣೆಗೆ, ಕೆಲವು Potter wasps ಮತ್ತು Mason wasps ಗಿಡಗಳ ಮೇಲೆ ಕಂಬಳಿ ಹುಳುಗಳನ್ನು ಹುಡುಕಿ, ಅವುಗಳನ್ನು ನಿಶ್ಚೇಷ್ಟಿತಗೊಳಿಸಿ ತಮ್ಮ ಮರಿಗಳಿಗೆ ಆಹಾರವಾಗಿ ಬಳಸುತ್ತವೆ.

ಆದರೆ ಇಲ್ಲಿ ಒಂದು ವಿಷಯವನ್ನು ವೈಜ್ಞಾನಿಕವಾಗಿ ಎಚ್ಚರಿಕೆಯಿಂದ ಅರ್ಥಮಾಡಿಕೊಳ್ಳಬೇಕು.ಆದರೆ ಕಂಬಳಿ ಹುಳುಗಳು ಮತ್ತು ಅವುಗಳನ್ನು ಬೇಟೆಯಾಡುವ ಕಣಜಗಳ ನಡುವಿನ ಸಂಬಂಧವು ಪ್ರಕೃತಿಯ ಸಹಜ ಕೀಟ ನಿಯಂತ್ರಣ ವ್ಯವಸ್ಥೆಗೆ ಒಂದು ಉತ್ತಮ ಉದಾಹರಣೆ.

ಪ್ರಕೃತಿಯಲ್ಲೇ ಈಗಾಗಲೇ ಕೀಟ ನಿಯಂತ್ರಣ ವ್ಯವಸ್ಥೆ ಇದೆ:

ಶಾಲೆಯಲ್ಲಿ ಓದಿದ ಆಹಾರ ಸರಪಳಿ ನೆನಪಿದೆಯೇ?

ಪ್ರಕೃತಿಯಲ್ಲಿ ಒಂದು ಜೀವಿ ಮತ್ತೊಂದು ಜೀವಿಯ ಮೇಲೆ ಅವಲಂಬಿತವಾಗಿರುತ್ತದೆ. ಕೀಟಗಳನ್ನು ಜೇಡಗಳು, ಕಪ್ಪೆಗಳು, ಹಲ್ಲಿಗಳು ಮತ್ತು ಪಕ್ಷಿಗಳು ತಿನ್ನುತ್ತವೆ. ಇಲಿಗಳು ಹಾವುಗಳಿಗೆ ಆಹಾರವಾಗುತ್ತವೆ.ಹೀಗೆ ಪ್ರಕೃತಿಯಲ್ಲಿರುವ ಜೀವಿಗಳೆಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿವೆ.

ಕೃಷಿಯೂ ಇದಕ್ಕೆ ಹೊರತಲ್ಲ. ಒಂದು ನಿರ್ದಿಷ್ಟ ಹಾನಿಕಾರಕ ಕೀಟದ ಸಂಖ್ಯೆ ಹೆಚ್ಚಾದಾಗ, ಅದರ ಸಹಜ ಶತ್ರುಗಳಿಗೆ ಆಹಾರವೂ ಹೆಚ್ಚಾಗುತ್ತದೆ.ಆಗ ಆ ಕೀಟಗಳನ್ನು ಬೇಟೆಯಾಡುವ ಪರಭಕ್ಷಕ ಕೀಟಗಳು ಮತ್ತು ಪರೋಪಜೀವಿ ಕೀಟಗಳು ಹೆಚ್ಚು ಸಕ್ರಿಯವಾಗಬಹುದು.

ಈ ರೀತಿಯಾಗಿ ಪ್ರಕೃತಿ ತನ್ನದೇ ಆದ ರೀತಿಯಲ್ಲಿ ಪರಿಸರ ಸಮತೋಲನವನ್ನು ಕಾಪಾಡಲು ಪ್ರಯತ್ನಿಸುತ್ತದೆ.ಆದ್ದರಿಂದ ರೈತನ ಗುರಿ ತನ್ನ ಹೊಲದಲ್ಲಿ ಒಂದು ಕೀಟವೂ ಇರಬಾರದು ಎಂಬುದಾಗಿರಬೇಕಿಲ್ಲ.

ನಿಜವಾದ ಗುರಿ ಎಂದರೆ, ಹಾನಿಕಾರಕ ಕೀಟಗಳ ಸಂಖ್ಯೆ ಬೆಳೆಗೆ ಆರ್ಥಿಕವಾಗಿ ಸಹಿಸಲಾಗದಷ್ಟು ಹಾನಿ ಮಾಡುವ ಮಟ್ಟಕ್ಕೆ ಏರದಂತೆ ನೋಡಿಕೊಳ್ಳುವುದು.

ರೈತನ ಸಂಬಳವಿಲ್ಲದ ಕೆಲಸಗಾರರನ್ನು ಪರಿಚಯಿಸಿಕೊಳ್ಳಿ :

ನಮ್ಮ ಹೊಲಗಳಲ್ಲಿ ಪ್ರತಿದಿನ ಅನೇಕ ಉಪಕಾರಿ ಜೀವಿಗಳು ಕೆಲಸ ಮಾಡುತ್ತಿವೆ.

ಪ್ರಾರ್ಥನಾ ಕೀಟ ಅಥವಾ ಪ್ರೇಯಿಂಗ್ ಮಾಂಟಿಸ್ ಕೀಟಗಳನ್ನು ಭಕ್ಷಿಸುವ ಹಾತೆ
ಪ್ರಾರ್ಥನಾ ಕೀಟ ಅಥವಾ ಪ್ರೇಯಿಂಗ್ ಮಾಂಟಿಸ್ ಕೀಟಗಳನ್ನು ಭಕ್ಷಿಸುವ ಹಾತೆ

ಜೇಡಗಳು:

ಜೇಡಗಳು ವಿವಿಧ ರೀತಿಯ ಕೀಟಗಳನ್ನು ಹಿಡಿದು ತಿನ್ನುತ್ತವೆ. ನಮ್ಮ ಬೆಳೆಗಳಲ್ಲಿ ಕಾಣುವ ಅನೇಕ ಕೀಟಗಳನ್ನು ಸಹಜವಾಗಿ ನಿಯಂತ್ರಿಸುವಲ್ಲಿ ಅವುಗಳ ಪಾತ್ರವಿದೆ.

ಲೇಡಿಬರ್ಡ್ ಬೀಟಲ್‌ಗಳು:

ಇವುಗಳ ವಯಸ್ಕ ಕೀಟಗಳಷ್ಟೇ ಅಲ್ಲ, ಅವುಗಳ ಮರಿಹುಳುಗಳೂ ಸಹ ಗಿಡಹೇನುಗಳು ಸೇರಿದಂತೆ ಹಲವು ಮೃದುದೇಹದ ಕೀಟಗಳನ್ನು ತಿನ್ನುತ್ತವೆ.

ಗ್ರೀನ್ ಲೇಸ್‌ವಿಂಗ್ ಮರಿಹುಳುಗಳು:

ಇವು ಹಲವಾರು ಸಣ್ಣ ಕೀಟಗಳನ್ನು ಹಿಡಿದು ತಿನ್ನುವ ಅತ್ಯಂತ ಚುರುಕಾದ ಪರಭಕ್ಷಕಗಳು.

ಪರಭಕ್ಷಕ ಕೀಟಗಳು:

 ಪ್ರಾರ್ಥನಾ  ಹಾತೆ ಅಥವಾ  ( Praying mantis) ನಂತಹ ಕೆಲವು ಕೀಟಗಳು ಇತರ ಕೀಟಗಳ ಮೊಟ್ಟೆ, ಮರಿಹುಳು ಮತ್ತು ಇತರ ಹಂತಗಳನ್ನು ತಿನ್ನುತ್ತವೆ.

ಡ್ರ್ಯಾಗನ್‌ಫ್ಲೈ ಮತ್ತು ಡ್ಯಾಮ್ಸೆಲ್‌ಫ್ಲೈ:

ಇವು ಹಾರುವ ಸಣ್ಣ ಕೀಟಗಳನ್ನು ಹಿಡಿದು ತಿನ್ನುತ್ತವೆ.

ಕಣಜಗಳು:

ಕಣಜಗಳಲ್ಲಿಯೂ ಹಲವು ವಿಧಗಳಿವೆ.

ಕೆಲವು ಕಣಜಗಳು ಇತರ ಕೀಟಗಳನ್ನು ಬೇಟೆಯಾಡುತ್ತವೆ. ಇನ್ನೂ ಕೆಲವು ಪರೋಪಜೀವಿ ಕಣಜಗಳು (parasitoid wasps) ಹಾನಿಕಾರಕ ಕೀಟಗಳ ದೇಹದ ಒಳಗೆ ಅಥವಾ ಅದರ ಮೇಲೆ ಮೊಟ್ಟೆ ಇಡುತ್ತವೆ. ನಂತರ ಅವುಗಳಿಂದ ಹೊರಬರುವ ಮರಿಗಳು ಆ ಆತಿಥೇಯ ಕೀಟವನ್ನು ಕೊನೆಗೆ ನಾಶಪಡಿಸುತ್ತವೆ.

ಇವು ಯಾವುದಕ್ಕೂ ರೈತನ ಬಳಿ ಸಂಬಳ ಕೇಳುವುದಿಲ್ಲ. ಪ್ರಕೃತಿಯೇ ಈ ಕೀಟ ನಿಯಂತ್ರಣ ಸೇವೆಯನ್ನು ನಮಗೆ ಉಚಿತವಾಗಿ ನೀಡುತ್ತಿದೆ!

ಒಂದು ಸಿಂಪಡಣೆ — ಶತ್ರುವಿನ ಜೊತೆಗೆ ಸ್ನೇಹಿತನನ್ನೂ ಕೊಲ್ಲಬಹುದು:

ಇಲ್ಲಿಯೇ ವೈಜ್ಞಾನಿಕ ಅರಿವಿಲ್ಲದೆ ಕೀಟನಾಶಕ ಬಳಸುವುದರಿಂದ ಸಮಸ್ಯೆ ಉಂಟಾಗುತ್ತದೆ. ರೈತನಿಗೆ ಕೆಲವು ಕಂಬಳಿ ಹುಳುಗಳು ಕಾಣಿಸಿದವು ಎಂದುಕೊಳ್ಳಿ. ತಕ್ಷಣ ಒಂದು ವ್ಯಾಪಕ ಪರಿಣಾಮದ ಕೀಟನಾಶಕವನ್ನು ಸಿಂಪಡಿಸಿದರೆ ಕಂಬಳಿ ಹುಳುಗಳು ಸಾಯಬಹುದು.

ಆದರೆ ಅವುಗಳ ಜೊತೆಗೆ ಜೇಡಗಳು, ಉಪಕಾರಿ ಕಣಜಗಳು, ಲೇಡಿಬರ್ಡ್ ಬೀಟಲ್‌ಗಳು ಮತ್ತು ಇತರ ಸಹಜ ಶತ್ರುಗಳೂ ಸಾಯಬಹುದು. ಸ್ವಲ್ಪ ಸಮಯದ ನಂತರ ಹಾನಿಕಾರಕ ಕೀಟಗಳು ಮತ್ತೆ ಹೊಲಕ್ಕೆ ಬರಬಹುದು.

ಆದರೆ ಅವುಗಳನ್ನು ನಿಯಂತ್ರಿಸುತ್ತಿದ್ದ ಸಹಜ ಶತ್ರುಗಳು ಮರಳಿ ಬಂದು ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗಬಹುದು. ಅವುಗಳ ಸಂಖ್ಯೆ ಪ್ರಕೃತಿಯಲ್ಲಿ ಹೆಚ್ಚು ಇರುವುದಿಲ್ಲ. ಒಳ್ಳೆಯವರ ಸಂಖ್ಯೆಗಿಂತ ದುಷ್ಟರ ಸಂಖ್ಯೆಯೇ ಹೆಚ್ಚು  ಇರುತ್ತದೆ ಎಂದು ಬಲ್ಲವರು ಹೇಳುವುದುಂಟು.

ಇದರಿಂದ ಕೆಲವೊಮ್ಮೆ ಕೀಟನಾಶಕ ಸಿಂಪಡಿಸಿದ ನಂತರವೂ ಕೀಟಗಳ ಸಂಖ್ಯೆ ಮತ್ತೆ ಹೆಚ್ಚಾಗುವ ಸನ್ನಿವೇಶ  (Pest resurgence) ಉಂಟಾಗಬಹುದು. ಆದ್ದರಿಂದ ಒಂದು ಮುಖ್ಯ ವಿಷಯ ನೆನಪಿಡಿ:

ಕೀಟ ಕಂಡ ತಕ್ಷಣ ಕೀಟನಾಶಕ ಸಿಂಪಡಿಸುವುದು ಸರಿಯಾದ ನಿರ್ಧಾರವಲ್ಲ:

ಮೊದಲು ಆ ಕೀಟ ಯಾವುದು ಎಂಬುದನ್ನು ಗುರುತಿಸಿ.ನಂತರ ಅದು ಎಷ್ಟು ಪ್ರಮಾಣದಲ್ಲಿದೆ, ಬೆಳೆ ಎಷ್ಟು ಹಾನಿಗೊಳಗಾಗಿದೆ ಮತ್ತು ಅದರ ಸಹಜ ಶತ್ರುಗಳು ಅಲ್ಲಿ ಇದ್ದಾರೆಯೇ ಎಂಬುದನ್ನು ಗಮನಿಸಿ. ಬೇರೆ ವಿಧಾನದಲ್ಲಿ ನಿಯಂತ್ರಣ ಸಾಧ್ಯವೇ ಎಂದು ಸ್ವಲ್ಪ  ಯೋಚಿಸಿ.

“ಪ್ರತಿದಿನ ನಿಮ್ಮ ಗಿಡಗಳೊಂದಿಗೆ ಮಾತನಾಡಿ”

  • ಹಿರಿಯ ರೈತರು ಕೆಲವೊಮ್ಮೆ ಹೇಳುತ್ತಾರೆ:“ಪ್ರತಿದಿನ ತೋಟಕ್ಕೆ ಹೋಗಿ ಗಿಡಗಳೊಂದಿಗೆ ಮಾತನಾಡಿ.”
  • ಗಿಡಗಳು ನಮ್ಮೊಂದಿಗೆ ಮಾತಿನಲ್ಲಿ ಉತ್ತರಿಸುವುದಿಲ್ಲ.ಆದರೆ ಈ ಮಾತಿನೊಳಗೆ ಬಹಳ ದೊಡ್ಡ ಕೃಷಿ ಜ್ಞಾನ ಅಡಗಿದೆ.
  • ಪ್ರತಿದಿನ ತೋಟಕ್ಕೆ ಹೋಗಿ ಗಿಡಗಳನ್ನು ಗಮನಿಸಿದರೆ, ಗಿಡದಲ್ಲಿ ಏನು ನಡೆಯುತ್ತಿದೆ ಎಂಬುದು ನಮಗೆ ನಿಧಾನವಾಗಿ ಅರ್ಥವಾಗುತ್ತದೆ.
  • ಕೆಲವು ಎಲೆಗಳನ್ನು ತಿರುಗಿಸಿ ನೋಡಿ.
  • ಮುದುರಿದ ಎಲೆಗಳ ಒಳಗೆ ನೋಡಿ.
  • ಹೊಸ ಚಿಗುರು ಮತ್ತು ಹೂಗಳನ್ನು ಗಮನಿಸಿ.
  • ಮೊಟ್ಟೆ, ಕಂಬಳಿ ಹುಳು, ಗಿಡಹೇನು, ಜೇಡರ ಬಲೆ ಹಾಗೂ ಅಸಹಜ ಹಾನಿಯ ಗುರುತುಗಳನ್ನು ಹುಡುಕಿ.
  • ಆದರೆ ಅಷ್ಟೇ ಮುಖ್ಯವಾಗಿ—
  • ಜೇಡಗಳು, ಲೇಡಿಬರ್ಡ್ ಬೀಟಲ್‌ಗಳು, ಕಣಜಗಳು ಮತ್ತು ಇತರ ಉಪಕಾರಿ ಜೀವಿಗಳನ್ನೂ ಹುಡುಕಿ.
  • ಸಮಸ್ಯೆಯನ್ನು ಆರಂಭದಲ್ಲೇ ಗುರುತಿಸಿದರೆ ಅದನ್ನು ನಿರ್ವಹಿಸುವುದು ಸುಲಭ.
  • ಕೆಲವೊಮ್ಮೆ ಕೆಲವು ಹಾನಿಗೊಳಗಾದ ಎಲೆಗಳನ್ನು ಕೈಯಿಂದಲೇ ತೆಗೆದುಹಾಕಬಹುದು.

ಕೀಟದ ಸ್ವಭಾವಕ್ಕೆ ಅನುಗುಣವಾಗಿ ಬಲೆಗಳು, ಸ್ವಚ್ಛತೆ, ಜೈವಿಕ ನಿಯಂತ್ರಣ ಮತ್ತು ಸಮಗ್ರ ಕೀಟ ನಿರ್ವಹಣೆ (IPM) ಮುಂತಾದ ಕ್ರಮಗಳೇ ಸಾಕಾಗಬಹುದು.

ಕೀಟನಾಶಕ ಒಂದು ಸಾಧನ — ಮೊದಲ ಉತ್ತರ ಅಲ್ಲ:

ಇದರರ್ಥ ರೈತರು ಎಂದಿಗೂ ಕೀಟನಾಶಕ ಬಳಸಬಾರದು ಎಂದಲ್ಲ.ಹಾನಿಕಾರಕ ಕೀಟಗಳ ಸಂಖ್ಯೆ ಆರ್ಥಿಕ ಹಾನಿ ಉಂಟುಮಾಡುವ ಮಟ್ಟವನ್ನು ಮೀರಿದಾಗ ಮತ್ತು ಇತರ ನಿಯಂತ್ರಣ ಕ್ರಮಗಳು ಸಾಕಾಗದಿದ್ದಾಗ, ಸೂಕ್ತ ಕೀಟನಾಶಕದ ಬಳಕೆ ಅಗತ್ಯವಾಗಬಹುದು.

ಆದರೆ ರಾಸಾಯನಿಕ ನಿಯಂತ್ರಣವು ಅಗತ್ಯವಿದ್ದಾಗ ಮಾತ್ರ, ವೈಜ್ಞಾನಿಕ ಶಿಫಾರಸಿನಂತೆ ಮತ್ತು ಸಾಧ್ಯವಾದಷ್ಟು ಆಯ್ದ ಪರಿಣಾಮ ಹೊಂದಿರುವ ಕೀಟನಾಶಕಗಳನ್ನು ಬಳಸಿ ಮಾಡಬೇಕು.

ಅದು ಕೂಡ ಆ ನಿರ್ದಿಷ್ಟ ಬೆಳೆ ಮತ್ತು ಕೀಟಕ್ಕೆ ಕಾನೂನುಬದ್ಧವಾಗಿ ಅನುಮೋದಿತವಾಗಿರುವ ಉತ್ಪನ್ನವನ್ನು, ಶಿಫಾರಸು ಮಾಡಿದ ಪ್ರಮಾಣ ಮತ್ತು ಸರಿಯಾದ ಸಮಯದಲ್ಲಿ ಬಳಸಬೇಕು.

ಇದೇ **ಸಮಗ್ರ ಕೀಟ ನಿರ್ವಹಣೆ — Integrated Pest Management (IPM)**ಯ ಮೂಲ ತತ್ವ.

  • ಮೊದಲು ಗಮನಿಸುವುದು.
  • ನಂತರ ತಡೆಗಟ್ಟುವುದು.
  • ಸಹಜ ಶತ್ರುಗಳನ್ನು ಸಂರಕ್ಷಿಸುವುದು.
  • ಅಗತ್ಯವಿದ್ದಲ್ಲಿ ಸಾಂಸ್ಕೃತಿಕ, ಯಾಂತ್ರಿಕ ಮತ್ತು ಜೈವಿಕ ನಿಯಂತ್ರಣ ಕ್ರಮಗಳನ್ನು ಬಳಸುವುದು.
  • ಕೊನೆಯದಾಗಿ, ನಿಜವಾಗಿಯೂ ಅಗತ್ಯವಿದ್ದಾಗ ಮಾತ್ರ ಕೀಟನಾಶಕ ಬಳಸುವುದು.
  • ಸಿಂಪಡಿಸುವ ಮೊದಲು ಮತ್ತೊಮ್ಮೆ ಗಮನಿಸಿ

ನಿಮ್ಮ ಬೆಳೆಯ ಸುತ್ತ ಹಾರಾಡುತ್ತಿರುವ ಸಣ್ಣ ಕಣಜ ನಿಮಗೆ ಸಾಮಾನ್ಯ ಕೀಟದಂತೆ ಕಾಣಬಹುದು. ಎಲೆಯ ಕೆಳಗೆ ಸುಮ್ಮನೆ ಕುಳಿತಿರುವ ಜೇಡ ನಿಮಗೆ ಉಪಯೋಗವಿಲ್ಲದಂತೆ ಕಾಣಬಹುದು.ಲೇಡಿಬರ್ಡ್ ಬೀಟಲ್ ಮತ್ತೊಂದು ಸಾಮಾನ್ಯ ಕೀಟದಂತೆ ಕಾಣಬಹುದು. ಆದರೆ ಇವುಗಳಲ್ಲಿ ಪ್ರತಿಯೊಂದೂ ರೈತನಿಗಾಗಿ ಒಂದು ಕೆಲಸ ಮಾಡುತ್ತಿರಬಹುದು.

ಆದ್ದರಿಂದ ಕೀಟನಾಶಕ ಸಿಂಪಡಿಸುವ ಯಂತ್ರವನ್ನು ಕೈಗೆತ್ತಿಕೊಳ್ಳುವ ಮೊದಲು— ಒಮ್ಮೆ ಬೆಳೆಯನ್ನು ಮತ್ತೊಮ್ಮೆ ಗಮನಿಸಿ. ನಿಮ್ಮನ್ನು ನೀವೇ ಕೇಳಿಕೊಳ್ಳಿ: “ನಾನು ನನ್ನ ಶತ್ರುವನ್ನು ಮಾತ್ರ ಕೊಲ್ಲುತ್ತಿದ್ದೇನೆಯೇ? ಅಥವಾ ನನ್ನ ಶತ್ರುವಿನ ಶತ್ರುವನ್ನೂ ಕೊಲ್ಲುತ್ತಿದ್ದೇನೆಯೇ?”

ಈ ಪುಟ್ಟ ಸಹಜ ಕೀಟ ನಿಯಂತ್ರಕರಿಗೆ ಮಾತನಾಡುವ ಶಕ್ತಿ ಇದ್ದಿದ್ದರೆ, ಬಹುಶಃ ಅವು ರೈತನಿಗೆ ಹೀಗೆ ಹೇಳುತ್ತಿದ್ದವು: “ರೈತ ಸ್ನೇಹಿತನೇ, ನಾವು ನಿಮ್ಮ ಬೆಳೆಯನ್ನು ರಕ್ಷಿಸುತ್ತಿದ್ದೇವೆ. ದಯವಿಟ್ಟು ನಮ್ಮನ್ನು ಕೊಲ್ಲಬೇಡಿ!”

Leave a Reply

Your email address will not be published. Required fields are marked *

error: Content is protected !!